ಶಂಕರದಾಸಿಮಯ್ಯ

	ಪ್ರಸಿದ್ಧ ವಚನಕಾರ. ಬಿಜಾಪುರ ಜಿಲ್ಲೆಯ ಸ್ಕಂದಶಿಲೆ (ಈಗಿನ ಇಳಕಲ್ಲು) ಇವನ ಜನ್ಮಸ್ಥಳ. ಗೋವಿಂದಭಟ್ಟ ಮತ್ತು ದುಮ್ಮವ್ವೆಯರಿಗೆ ಮಗನಾಗಿ ಹುಟ್ಟಿ ವೀರಶೈವತ್ವವನ್ನಂಗೀಕರಿಸಿ ಶಿವಶರಣನಾದ. ಕೃಷ್ಣಾತೀರದ ನವಿಲುತೀರ್ಥದಲ್ಲಿ ಜಡೆಶಂಕರನ ಪೂಜಕನಾದ ದಾಸಿಮಯ್ಯ ಸಿಂಪಿಗ ಕಾಯಕ ಕೈಕೊಂಡು ಶಿವನಿಗೆ ಉಡಲಿತ್ತು ಅವನಿಂದ ಭಾಳನೇತ್ರವನ್ನು ಪಡೆದವನೆಂದು ಪಂಡಿತಮಲ್ಲಿಕಾ ರ್ಜುನನ ಶಂಕರದಾಸಿಮಯ್ಯಪುರಾಣದಲ್ಲಿ ಹೇಳಿದೆ. ಮುದನೂರಿನ ಜೇಡರದಾಸಿಮಯ್ಯನಿಗೆ ಶಿವನಿತ್ತ ತವನಿಧಿಯನ್ನು ಬಯಲುಮಾಡಿ ಅವನಿಗೆ ದಾಸೋಹಂ ಭಾವದ ನೆಲೆಗಾಣಿಸಿದನೆಂದು ಹರಿಹರಕವಿಯ ಶಂಕರದಾಸಿಮಯ್ಯನ ರಗಳೆಯಲ್ಲಿ ಹೇಳಿದೆ. ಇದರಿಂದ ಇವನ ಶ್ರೇಷ್ಠತೆ ವ್ಯಕ್ತವಾಗುತ್ತದೆ. ಕಲ್ಯಾಣದ ಜಯಸಿಂಹ ದೊರೆಯ ಆಸ್ಥಾನದಲ್ಲಿ ಈತ ಪರವಾದಿಗಳನ್ನು ಜಯಿಸಿ ವೀರಶೈವ ಮತವನ್ನು ಅನುಗೊಳಿಸಿದನೆಂದೂ ಉಜ್ಜಯಿನಿಯ ಮಹಾಕಾಳಿಯನ್ನು ಒಲಿಸಿಕೊಂಡು, ಕರಹಾಟದೇಶದ ಪೆಂಬೇರದಲ್ಲಿ ಮೈಲಾರನನ್ನು ನಿಗ್ರಹಿಸಿ ಅಲ್ಲಿನ ಕಾಪಾಲಿಕ ಮಾರ್ಗದ ಸಿದ್ಧಸಾಧಕರನ್ನು ತನ್ನ ಶಿವಭಕ್ತಿಮಹಿಮಾತಿಶಯದಿಂದ ವೀರಶೈವರನ್ನಾಗಿ ಮಾಡಿ ಮರಳಿ ಬಂದು ಆರಾಧ್ಯದೈವವಾದ ನವಿಲೆಯ (ನವಿಲುತೀರ್ಥ) ಜಡೆಶಂಕರನಲ್ಲಿ ಬಯಲಾದನೆಂದೂ ಪ್ರತೀತಿ. ಶಿವದಾಸಿ ಈತನ ಸತಿಯಾ ಗಿದ್ದಳೆಂದೂ ಇವನಿಗೆ ಸದ್ಯೋಜಾತನೆಂಬೊಬ್ಬ ಮಗನಿದ್ದುದಾಗಿಯೂ ತಿಳಿದುಬರುತ್ತದೆ.  ಜೇಡರದಾಸಿಮಯ್ಯನನ್ನು ಕಾಣಲು ಮುದನೂರಿಗೆ ಹೋದನೆಂಬ ಸಂಗತಿಯ ಮೇಲಿಂದ ಈತ ಬಸವಪೂರ್ವಕಾಲೀನ ವಚನಕಾರನಾಗಿದ್ದನೆಂಬುದು ಸ್ಪಷ್ಟ. ಶ್ರೀಗಿರಿಗೆ ಹೋಗಿ ಅಗ್ನಿಗೆ ಆಹುತಿ ಯಾದ ವೀರಶಂಕರದೇವನೆಂಬವನಿಂದ ಶಂಕರದಾಸಿಮಯ್ಯ ಭಿನ್ನನೆಂದು ತಿಳಿದುಬರುತ್ತದೆ.  ಭೈರವೇಶ್ವರಕಾವ್ಯದ ಕಥಾಸಾಗರ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ, ಶಿವತತ್ತ್ವಚಿಂತಾಮಣಿ, ಗುರುರಾಜಚಾರಿತ್ರ ಮತ್ತಿತರ ಕಾವ್ಯಗಳಲ್ಲಿ ಇವನ ವಿಷಯದ ಪ್ರಸ್ತಾಪ ಕಂಡುಬರುತ್ತದೆ.				
		    (ವಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ